ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ‘ಶೌರ್ಯ’ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ.
ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಕಾಡಾನೆ ‘ಶೌರ್ಯ’ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಮೃತಪಟ್ಟಿದೆ. 2026ರ ಫೆಬ್ರವರಿಯಲ್ಲಿ ನಡೆದ ಕಾಡಾನೆ ದಾಳಿಗಳ ಬಳಿಕ ಶೌರ್ಯನನ್ನು ಅರಣ್ಯ ಇಲಾಖೆ ಸೆರೆಹಿಡಿದಿತ್ತು.
ಸೆರೆ ಕಾರ್ಯಾಚರಣೆ ಹಾಗೂ ನಂತರದ ತರಬೇತಿ ವೇಳೆ ಆನೆಗೆ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ. ಕಾಲು ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಸೆರೆ ಹಿಡಿಯುವ ಸಂದರ್ಭದಲ್ಲಿ ತೊಡೆಯ ಒಳಭಾಗದಲ್ಲೂ ಗಾಯವಾಗಿತ್ತು ಎನ್ನಲಾಗಿದೆ.
ಗಾಯ ತೀವ್ರಗೊಂಡ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ಸಂಜೆ ಶೌರ್ಯ ಆನೆ ಬಿಡಾರದಲ್ಲಿ ಕುಸಿದು ಬಿದ್ದಿತ್ತು. ಕೂಡಲೇ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಅಕ್ಟೋಬರ್ 1ರ ಬೆಳಗ್ಗೆ ಮೃತಪಟ್ಟಿದೆ.
ಒಂದೇ ವಾರದಲ್ಲಿ ಇಬ್ಬರ ಸಾವಿಗೆ ಕಾರಣವಾಗಿದ್ದ ಶೌರ್ಯ
ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರ ಭಾಗದಲ್ಲಿರುವ ನಾಗೇಶ್ ಗೌಡ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಕಾಡಾನೆ ದಾಳಿಗೆ ಮೃತಪಟ್ಟಿದ್ದರು.
ಇದಾದ ಒಂದು ವಾರದಲ್ಲೇ ಇದೇ ಕಾಫಿ ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಅವರ ಮೇಲೂ ಕಾಡಾನೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬೋರಮ್ಮ ಸ್ಥಳದಲ್ಲೇ ಮೃತಪಟ್ಟಿದ್ದರು.
ಈ ಘಟನೆಗಳ ಬಳಿಕ ಕಾಡಾನೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಏಳು ಪಳಗಿದ ಆನೆಗಳು ಹಾಗೂ 75 ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಶೌರ್ಯನನ್ನು ಸೆರೆಹಿಡಿದಿದ್ದರು.
ಸಕ್ರೆಬೈಲಿನಲ್ಲಿ ಪಳಗಿಸುವಿಕೆ
ಸೆರೆಹಿಡಿದ ಬಳಿಕ ಶೌರ್ಯನನ್ನು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿ ಆನೆಗೆ ‘ಶೌರ್ಯ’ ಎಂದು ಹೆಸರಿಟ್ಟು ಮರದ ಕ್ರಾಲ್ನಲ್ಲಿ ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಗಿತ್ತು.
ಸುಮಾರು ಮೂರು ತಿಂಗಳ ಅವಧಿಯಲ್ಲಿ ಮಾವುತರು ಹಾಗೂ ಕಾವಾಡಿಗಳು ಶೌರ್ಯನಿಗೆ ತರಬೇತಿ ನೀಡಿದ್ದರು. ಆದರೆ ಸೆರೆ ಕಾರ್ಯಾಚರಣೆ ಮತ್ತು ತರಬೇತಿ ವೇಳೆ ಉಂಟಾಗಿದ್ದ ಗಾಯಗಳೇ ಬಳಿಕ ಗಂಭೀರಗೊಂಡಿದ್ದವು ಎನ್ನಲಾಗಿದೆ.
ಶೌರ್ಯನ ಸಾವಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಹಾಗೂ ಮರಣೋತ್ತರ ಪರೀಕ್ಷೆಯ ವರದಿ ಲಭ್ಯವಾದ ಬಳಿಕ ಸಾವಿನ ನಿಖರ ಕಾರಣ ಸ್ಪಷ್ಟವಾಗಲಿದೆ.