ಕಾರಿಗೆ ‘ಹೆಲ್ಮೆಟ್ ಧರಿಸಿಲ್ಲ’ ಅಂತ ₹500 ದಂಡ! ಅಥಣಿಯಲ್ಲಿ AI ಕ್ಯಾಮೆರಾ ಯಡವಟ್ಟು

ಅಥಣಿ: ಟ್ರಾಫಿಕ್ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಅಳವಡಿಸಿರುವ ಎಐ ಕ್ಯಾಮೆರಾ ಯಡವಟ್ಟಿನಿಂದ ಕಾರು ಮಾಲೀಕರೊಬ್ಬರಿಗೆ ‘ಹೆಲ್ಮೆಟ್ ಧರಿಸಿಲ್ಲ’ ಎಂದು ನೋಟಿಸ್ ನೀಡಿ ದಂಡ ವಿಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವವರಿಗೆ ತಮ್ಮ ಕಾರಿಗೆ ಸಂಬಂಧಿಸಿದಂತೆ ಟ್ರಾಫಿಕ್ ನಿಯಮ ಉಲ್ಲಂಘನೆಯ ಸಂದೇಶ ವಾಟ್ಸಪ್‌ನಲ್ಲಿ ಬಂದಿದೆ. ಅಂಬೇಡ್ಕರ್ ಸರ್ಕಲ್‌ನಲ್ಲಿ ಸಂಚರಿಸಿದ್ದ ಕಾರಿನ ಫೋಟೊವನ್ನು ನೋಟಿಸ್‌ನಲ್ಲಿ ಹಾಕಲಾಗಿದ್ದು, ₹500 ದಂಡ ವಿಧಿಸಲಾಗಿದೆ.


ಆದರೆ ನೋಟಿಸ್‌ನಲ್ಲಿ ‘ಸವಾರ ಹೆಲ್ಮೆಟ್ ಧರಿಸಿಲ್ಲ’ ಎಂದು ಉಲ್ಲೇಖಿಸಿರುವುದು ಕಾರು ಮಾಲೀಕರಿಗೆ ಅಚ್ಚರಿ ಮೂಡಿಸಿದೆ. ಕಾರಿನಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ವಿಧಿಸಿರುವುದು ಎಐ ಕ್ಯಾಮೆರಾ ವ್ಯವಸ್ಥೆಯಲ್ಲಿನ ಯಡವಟ್ಟಿಗೆ ಸಾಕ್ಷಿಯಾಗಿದೆ ಎಂದು ಸ್ಥಳೀಯರು ವ್ಯಂಗ್ಯವಾಡಿದ್ದಾರೆ.


ಘಟನೆ ಬಳಿಕ ಕಾರು ಮಾಲೀಕ ಸುಭಾಷ್ ಬೋಜನೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಇನ್ನು ಕಾರು ಚಾಲಕರು ಕೂಡ ಹೆಲ್ಮೆಟ್ ಧರಿಸಬೇಕಾ?’ ಎಂದು ಕೆಲವರು ಪ್ರಶ್ನಿಸಿದ್ದು, ಎಐ ಕ್ಯಾಮೆರಾದ ಕಾರ್ಯವೈಖರಿ ಕುರಿತು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಐ ಕ್ಯಾಮೆರಾ ಮೂಲಕ ದಾಖಲಾಗಿರುವ ದಂಡದ ನೋಟಿಸ್‌ ಇದೀಗ ಚರ್ಚೆಗೆ ಗ್ರಾಸವಾಗಿದೆ.