ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸಲು ಹಿರಿಯ ವಕೀಲರನ್ನು ನೇಮಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್ ಉತ್ತರಿಸಿದರು.


ತಮಗಿರುವ ಮಾಹಿತಿಯ ಪ್ರಕಾರ, ಕಸ್ತೂರಿ ರಂಗನ್ ವರದಿ ಜಾರಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನ ನೀಡಿದೆ ಎಂದು ಡಿಕೆಶಿ ಹೇಳಿದರು. ಅಧಿಸೂಚನೆ ಹೊರಡಿಸಿದ ಬಳಿಕ ಈ ಕುರಿತು ತನ್ನ ಗಮನಕ್ಕೆ ತರುವಂತೆ ನ್ಯಾಯಮಂಡಳಿ ಸೂಚಿಸಿದೆ ಎಂದರು.


ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ಕುರಿತು ಕಸ್ತೂರಿ ರಂಗನ್ ಸಮಿತಿಯ ಶಿಫಾರಸ್ಸನ್ನು ರಾಜ್ಯ ಸರ್ಕಾರ ಅಗೌರವಿಸುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕ ರೀತಿಯಲ್ಲಿ ಶಿಫಾರಸ್ಸುಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.


ಇನ್ನು ಪಶ್ಚಿಮಘಟ್ಟ ಪ್ರದೇಶದಲ್ಲಿ ಡ್ರೋನ್ ಸರ್ವೇ ನಡೆಸಿದರೆ ಎಲ್ಲವೂ ಹಸಿರು ಪ್ರದೇಶವಾಗಿ ಕಾಣುವ ಸಾಧ್ಯತೆ ಇದೆ ಎಂಬ ವಿಚಾರವೂ ಸದನದಲ್ಲಿ ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಮೂಲಕ ಸರ್ವೇ ನಡೆಸುವ ಅಗತ್ಯವಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.