Anekal  ನ ಹೊಸೂರು ಮುಖ್ಯರಸ್ತೆಯಲ್ಲಿ ಸ್ಕೂಟಿಗೆ ಸಿಮೆಂಟ್ ಲಾರಿ ಡಿಕ್ಕಿಯಾಗಿ 20 ವರ್ಷದ ವಿದ್ಯಾರ್ಥಿನಿ ಇಂಚರ ಮೃತಪಟ್ಟಿದ್ದಾರೆ.

Anekal : ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಮೃತರನ್ನು ಹೊಂಪಲಘಟ್ಟ ಗ್ರಾಮದ ನಿವಾಸಿ, 20 ವರ್ಷದ ಇಂಚರ ಎಂದು ಗುರುತಿಸಲಾಗಿದೆ.


ಇಂಚರ ಬಿಸಿಎ ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಸ್ಕೂಟಿಯಲ್ಲಿ ಕಾಲೇಜಿಗೆ ತೆರಳಿ ಮನೆಗೆ ವಾಪಸ್ ಬರುತ್ತಿದ್ದರು. ಇಂದು ಕಾಲೇಜು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಹೊಸೂರು ರಸ್ತೆಯ ಸವೇರಾ ಟೀ ಸ್ಟಾಲ್ ಬಳಿ ಸ್ಕೂಟಿಗೆ ಹಿಂಬದಿಯಿಂದ ಸಿಮೆಂಟ್ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಚರ ಮೃತಪಟ್ಟಿದ್ದಾರೆ. ಲಾರಿ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇಂಚರ ಮೃತದೇಹವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಘಟನೆ ಕುರಿತು ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.