ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಮುಂಜಾನೆ ದಿಢೀರ್ ಭೇಟಿ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ರೈತರು, ವರ್ತಕರು ಹಾಗೂ ಕೂಲಿಕಾರರ ಸಮಸ್ಯೆ ಆಲಿಸಿದರು.

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಮುಂಜಾನೆ 7 ಗಂಟೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಶವಂತಪುರ ಎಪಿಎಂಸಿಯ ಈರುಳ್ಳಿ ಮಂಡಿಗೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್, ಸ್ಥಳೀಯ ವರ್ತಕರು, ರೈತರು ಹಾಗೂ ಕೂಲಿಕಾರರೊಂದಿಗೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದರು.


ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯ ಸಣ್ಣ ಪೆಟ್ಟಿಗೆ ಹೋಟೆಲ್‌ಗೆ ತೆರಳಿದ ಡಿಕೆಶಿ, ಅಲ್ಲಿದ್ದ ಕೂಲಿ ಕಾರ್ಮಿಕರೊಂದಿಗೆ ಕುಳಿತು ಇಡ್ಲಿ ಸೇವಿಸಿದರು. ಇದೇ ವೇಳೆ ಕೂಲಿಕಾರರ ಉಪಹಾರದ ಬಿಲ್‌ ಪಾವತಿಸಲು ಮುಂದಾದ ಅವರು, ಹೋಟೆಲ್ ಮಾಲೀಕರಿಗೆ ₹500 ನೀಡಿ, ಕೂಲಿಕಾರರಿಂದ ಹಣ ಪಡೆಯಬೇಡಿ ಎಂದು ಹೇಳಿದರು.


ಎಪಿಎಂಸಿ ಅವ್ಯವಸ್ಥೆ ಬಗ್ಗೆ ದೂರು

ಡಿಕೆ ಶಿವಕುಮಾರ್ ಅವರ ಭೇಟಿಯ ವೇಳೆ ಎಪಿಎಂಸಿ ಮಾಜಿ ಸದಸ್ಯ ಅರುಣ್ ಪರಮೇಶ್ವರ್ ಸೇರಿದಂತೆ ಸ್ಥಳೀಯರು ಮಾರುಕಟ್ಟೆಯ ದುರವಸ್ಥೆ ಮತ್ತು ಅವ್ಯವಸ್ಥೆಗಳ ಬಗ್ಗೆ ದೂರು ನೀಡಿದರು.

ರೈತರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬಾಟಲಿ ನೀರಿಗೆ ₹20 ನೀಡಿ ಖರೀದಿಸುವ ಪರಿಸ್ಥಿತಿ ಇದೆ. ಶೌಚಾಲಯದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ದೂರಿದರು.

ರೈತರಿಗಾಗಿ ನಿರ್ಮಿಸಲಾದ ಮಾರುಕಟ್ಟೆಯಲ್ಲಿ ಹಿಂದಿನ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿ ಲೂಟಿ ಹೊಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವುದಾಗಿ ಸ್ಥಳೀಯರು ತಿಳಿಸಿದ್ದಾರೆ.


ರೈತರ ಅಳಲು ಆಲಿಸಿದ ಡಿಕೆಶಿ

ಮಂಡಿ ವ್ಯಾಪಾರಿಗಳು ಹಾಗೂ ರೈತರೊಂದಿಗೆ ನಡೆಸಿದ ಮಾತುಕತೆಯಲ್ಲಿ ರೈತರು ತಮ್ಮ ಹಲವು ಸಮಸ್ಯೆಗಳನ್ನು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದರು.

ಅಧಿಕಾರಿಗಳ ಸಮರ್ಪಕ ನಿಯಂತ್ರಣವಿಲ್ಲದ ಕಾರಣ ವ್ಯಾಪಾರಿಗಳು ತಮ್ಮದೇ ರೀತಿಯಲ್ಲಿ ದರ ನಿಗದಿಪಡಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದರು. ಚಿತ್ರದುರ್ಗ ಸೇರಿದಂತೆ ಹೊರ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ಸಮಸ್ಯೆಗಳಿರುವ ಕಾರಣ ಯಶವಂತಪುರ ಎಪಿಎಂಸಿಗೆ ಬರುತ್ತಿದ್ದೇವೆ. ಆದರೆ ಇಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ರೈತರು ಅಳಲು ತೋಡಿಕೊಂಡರು.

ತೂಕದಲ್ಲೂ ಮೋಸ ಆರೋಪ

ಯಶವಂತಪುರ ಎಪಿಎಂಸಿಯಲ್ಲಿ ತೂಕದಲ್ಲೂ ಮೋಸ ನಡೆಯುತ್ತಿದೆ ಎಂದು ರೈತರು ದೂರಿದರು. 65 ಕೆಜಿ ತೂಕದ ಮೂಟೆಯನ್ನು ಕೇವಲ 50 ಕೆಜಿ ಎಂದು ಲೆಕ್ಕ ಹಾಕಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು ರೈತರು ಡಿಕೆ ಶಿವಕುಮಾರ್ ಅವರ ಮುಂದಿಟ್ಟರು.

ರೈತರ ಸಮಸ್ಯೆಗಳನ್ನು ಆಲಿಸಿದ ಡಿ.ಕೆ. ಶಿವಕುಮಾರ್, ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ದಿಢೀರ್ ಭೇಟಿಯ ವೇಳೆ ರೈತರು, ಕೂಲಿಕಾರರು ಮತ್ತು ವ್ಯಾಪಾರಿಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿದ್ದು ಗಮನ ಸೆಳೆಯಿತು.