12 ಲಕ್ಷ ರೂ. ಮೌಲ್ಯದ ಬೆಳ್ಳಿ ಕಿರೀಟ, ಆಯುಧ: ಚಿಕ್ಕಮಗಳೂರು ಗಣಪತಿಗೆ ಭಕ್ತರ ವಿಶೇಷ ಕೊಡುಗೆ..
ಈ ಬಾರಿ Chikkamagaluru ನಗರದಲ್ಲಿ ಹಿಂದೂ ಮಹಾ ಗಣಪತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಹಿಂದಿನ ವರ್ಷಗಳಿಗಿಂತಲೂ ವಿಜೃಂಭಣೆಯಿಂದ ಗಣೇಶ ಚತುರ್ಥಿ ಆಚರಣೆಗೆ ಸಿದ್ಧತೆ ನಡೆಯುತ್ತಿದೆ.
ಈ ಬಾರಿ ಹತ್ತಾರು ಭಕ್ತರು ಸೇರಿ ಹಿಂದೂ ಮಹಾ ಗಣಪತಿಗೆ ಸುಮಾರು 12 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ 5 ಕೆಜಿ ಬೆಳ್ಳಿ ಆಭರಣಗಳನ್ನು ಮಾಡಿಸಿಕೊಟ್ಟಿದ್ದಾರೆ. ಇದರಲ್ಲಿ 4 ಕೆಜಿ ತೂಕದ ಬೆಳ್ಳಿ ಕಿರೀಟ ಹಾಗೂ 1 ಕೆಜಿ ತೂಕದ ಎರಡು ಬೆಳ್ಳಿ ಆಯುಧಗಳು ಸೇರಿವೆ.
ಬೆಳ್ಳಿ ಕಿರೀಟ ಹಾಗೂ ಆಯುಧಗಳನ್ನು ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿಯ ಕಾರ್ಯಕರ್ತರು ಶೃಂಗೇರಿಗೆ ಕೊಂಡೊಯ್ದು ಪೂಜೆ ಸಲ್ಲಿಸಿ ತಂದಿದ್ದಾರೆ. ಶೃಂಗೇರಿಯ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಶ್ರೀಗಳು ಬೆಳ್ಳಿ ಕಿರೀಟಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದ್ದಾರೆ.
ಇದೇ ವೇಳೆ ಹಿಂದೂ ಮಹಾ ಗಣಪತಿ ಆಡಳಿತ ಮಂಡಳಿಯ ವತಿಯಿಂದ ಶೃಂಗೇರಿ ಶ್ರೀಗಳಿಗೂ ಗಣೇಶೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಈ ಬಾರಿ ಒಟ್ಟು 11 ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಬೆಳ್ಳಿ ಕಿರೀಟ ಹಾಗೂ ಆಯುಧಗಳೊಂದಿಗೆ ಹಿಂದೂ ಮಹಾ ಗಣಪತಿ ಭಕ್ತರಿಗೆ ದರ್ಶನ ನೀಡಲಿದ್ದಾನೆ. ಕಳೆದ 12 ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಗಣೇಶೋತ್ಸವ ಆಚರಿಸುತ್ತಿರುವ ಆಡಳಿತ ಮಂಡಳಿ, ಈ ಬಾರಿಯೂ ವಿಶೇಷವಾಗಿ ಹಾಗೂ ವಿಜೃಂಭಣೆಯಿಂದ ಹಬ್ಬ ಆಚರಿಸಲು ಮುಂದಾಗಿದೆ.